06/10/2024
ಓಂ ಶ್ರೀ ಗುರುಭ್ಯೋ ನಮಃ 🕉️🚩 *ದೇವಿ ಸ್ಕಂದಮಾತಾ* ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಣ ಮಾಡುವ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದ ಮಾತೆ ಎನ್ನುತ್ತಾರೆ. ಭಕ್ತರು ಈ ತಾಯಿಯ ಮಂತ್ರವನ್ನು ಜಪಿಸಿದರೆ ಶೀಘ್ರ ಫಲಗಳನ್ನು ಪಡೆಯಬಹುದು. ಪಂಚಮಿಯ ದಿನ ಅಂದರೆ ನವರಾತ್ರಿಯ ಐದನೇ ದಿನ ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಹಾಗಾಗಿ ಭಗವಾನ್ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ಷಣ್ಮುಖ ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದದ ಜೊತೆಗೆ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಈ ಅವತಾರದಲ್ಲಿರುವ ಮಾತೆಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಈ ದಿನ ಸ್ಕಂದ ಮಾತೆಯನ್ನು ಪೂಜಿಸುವ ಜನರು ನಿರ್ಲಿಪ್ತ ಆಲೋಚನೆಗಳತ್ತ ಸಾಗುತ್ತಾರೆ. ಅವರು ಹೊರಗಿನ ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲಾ ಒತ್ತಡಗಳಿಂದ ಮುಕ್ತರಾಗುತ್ತಾರೆ. ಆಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳುವ ಭಕ್ತರು, ಆತಂಕವನ್ನು ತೊಡೆದುಹಾಕುತ್ತಾರೆ ಮತ್ತು ದೈವಿಕ ಸಂತೋಷವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.
ಸ್ಕಂದ ಮಾತೆಯು ಮಾತೃ ಸ್ವರೂಪದಲ್ಲಿರುವುದರಿಂದ, ಅವಳು ಅತ್ಯಂತ ಪರಿಶುದ್ಧ, ಕರುಣಾಮಯಿ ಮತ್ತು ದೈವಿಕ ಮಹಾಶಕ್ತಿಯಾಗಿದ್ದು, ತನ್ನ ಭಕ್ತರಿಗೆ ಆಸೆ ಈಡೇರಿಕೆಯನ್ನು ಅನುಗ್ರಹಿಸುತ್ತಾಳೆ ಮತ್ತು ತನ್ನ ಭಕ್ತರು ಬರಿಗೈಯಲ್ಲಿ ಹಿಂತಿರುಗಲು ಬಿಡುವುದಿಲ್ಲ.